ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ವಿತರಣೆಯಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ -ಕೃಷಿ ಸಚಿವ ಎಸ್. ಎ. ರವೀಂದ್ರನಾಥ್

ಬೆಂಗಳೂರು:ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ವಿತರಣೆಯಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ -ಕೃಷಿ ಸಚಿವ ಎಸ್. ಎ. ರವೀಂದ್ರನಾಥ್

Fri, 16 Apr 2010 04:23:00  Office Staff   S.O. News Service

ಬೆಂಗಳೂರು,ಏ.೧೫: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತ ಸಮುದಾಯಕ್ಕೆ ಬೇಕಾಗಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ವಿತರಣೆಯಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಕೃಷಿ ಸಚಿವ ಎಸ್. ಎ. ರವೀಂದ್ರನಾಥ್ ಭರವಸೆ ಕೊಟ್ಟಿದ್ದಾರೆ.

 

 

ಈ ಬಾರಿ ಬಿತ್ತನೇ ಬೀಜಕ್ಕೆ ತೊಂದರೆ ಉಂಟಾಗುವುದಿಲ್ಲ. ಕಳೆದ ಸಾಲಿಗಿಂತ ಶೇ. ೧೦ ರಷ್ಟು ಹೆಚ್ಚಿನ ಪ್ರಮಾಣದ ರಸಗೊಬ್ಬರ ದಾಸ್ತಾನಿದೆ. ಪ್ರಸ್ತುತ ೭.೬೪ ಲಕ್ಷ ಕ್ವ್ವಿಂಟಲ್ ಬಿತ್ತನೆ ಬೀಜಗಳು ಗೋದಾಮಿನಲ್ಲಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

 

 

ಶೇ. ೫೦ ರಷ್ಟು ಸಬ್ಸಿಡಿ ದರದಲ್ಲಿ ರೈತ ಸಮುದಾಯಕ್ಕೆ ಬೀಜ ಮಾರಾಟ ಮಾಡಲಾಗುವುದು. ಈ ಕುರಿತಾದ ಅಧಿಕೃತ ವಿವರಗಳನ್ನು ಒಳಗೊಂಡ ಮಾಹಿತಿ ವಿವರಗಳನ್ನು ಮಾರುಕಟ್ಟೆಗಳಿಗೆ ನೀಡಲಾಗಿದೆ. ಮುಂಗಾರಿಗೆ ಬೇಕಾಗುವ ೧೮ ಲಕ್ಷ ಟನ್ ರಸಗೊಬ್ಬರದ ಪೈಕಿ ಅಗತ್ಯವಿರುವ ಜಿಲ್ಲೆಗಳಿಗೆ ಬೇಡಿಕೆ ಇರುವಷ್ಟು ರಸಗೊಬ್ಬರವನ್ನು ಸಂಗ್ರಹಮಾಡಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

 

ಕೇಂದ್ರ ಕೃಷಿ ನಿರ್ದೇಶಾನಾಲಯ ನೀಡಿರುವ ಸೂಚನೆಯಂತೆ ರಸ ಗೊಬ್ಬರದ ಕೊರತೆ ಉಂಟಾಗದು ವಿದೇಶಗಳಿಂದ ಬೇಕಾಗುವ ರಸಗೊಬ್ಬರವನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ ಎಂದರು.

 

 

ದಾವಣಗೆರೆ, ಮೈಸೂರು, ಚಾಮರಾಜನಗರ, ಹಾವೇರಿ ಜಿಲ್ಲೆಗಳಲ್ಲಿ ಅಗತ್ಯವಾದ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರಾಜ್ಯದಲ್ಲಿ ಅಧಿಕೃತ ಪರವಾನಿಗೆ ಹೊಂದಿರುವ ಅಂಗಡಿಗಳಿಗೆ ರಸಗೊಬ್ಬರ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ. ರಸಗೊಬ್ಬರ ಕಾಳ ಸಂತೆಯಲ್ಲಿ ಮಾರಾಟವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೃತಕ ಅಭಾವ ಸೃಷ್ಟಿಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರವೀಂದ್ರ ನಾಥ್ ಎಚ್ಚರಿಕೆ ನೀಡಿದರು.

 

ನೆರೆ ಹಾವಳಿಯಿಂದ ಭೂಮಿ ಹಾಳಾಗಿರುವ ಪ್ರದೇಶಗಳಲ್ಲಿ ಭೂಮಿ ಸರಿಪಡಿಸುವ ಕಾರ್ಯವನ್ನು ಜಿಲ್ಲಾ ಪಂಚಾಯಿತಿಗಳಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಅತಿವೃಷ್ಠಿ ಯಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಿಯಾಯತಿ ದರದಲ್ಲಿ ರಸಗೊಬ್ಬರ ಮತ್ತು ಬೀಜಗಳನ್ನು ವಿತರಿಸುವ ಬಗ್ಗೆಯೂ ಮುಖ್ಯಮಂತ್ರಿ ಅವರ ಜೊತೆ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು


Share: